​ಅಲ್ನೋಡಿ ಅದೆ ಮಧುಗಿರಿ ಬೆಟ್ಟ

ನನಗೆ ಹುಟ್ಟು ಇರಬಹುದೆನೊ? ಗೊತ್ತಿಲ್ಲ . ಅದರ ಮೂಲ ಹುಡುಕಿಕೊಂಡು ವಿಜ್ಞಾನದ ಬೆನ್ನು ಹತ್ತಿದರೆ  ಬರಿ ವಿಸ್ಮಯಗಳು ರೆಕ್ಕೆ ಬಿಚ್ಚುತ್ತವೆ ಅಷ್ಟೇ. ಇನ್ನು ಸಾವಿನ ಬಗ್ಗೆ ಬಲ್ಲವರಾರು? ಭೂತಾಯಿ ಮುನಿದರೆ ನನಗೂ ಮೃತ್ಯು ಬಂದಹಾಗೆ ಲೆಕ್ಕ. ನನ್ನದು ದೈತ್ಯಾಕಾರ. ಎಲ್ಲ ದಿಕ್ಕಿನಲ್ಲಿಯೂ ಅಸಮವಾಗಿ ಹಬ್ಬಿಕೊಂಡು ನಿಂತಿದ್ದೆನೆ. ಇಂತಹದ್ದೇ ನಿರ್ದಿಷ್ಟ ಅನ್ನೊ ಆಕಾರವಂತು ಇಲ್ಲ. ಹಾಗೆ ಸುಮ್ಮನೆ ನಿಂತಲ್ಲೆ ನಿಂತಿರುತ್ತೇನೆ. ಮಳೆ ಅನ್ನೊದಿಲ್ಲ ಚಳಿ ಅನ್ನೊದಿಲ್ಲ. ಬಿಸಿಲಂತು ನನ್ನನ್ನು ಕಾಯಿಸದೆ ಬಿಡೊದಿಲ್ಲ. ಚಲನೆ ನನ್ನಿಂದ ಅಸಾಧ್ಯ. 


ರಾಜಾಧಿ ರಾಜರು ಬಂದರು. ನನ್ನನ್ನು ಕೋಟೆಯಾಗಿ ಮಾಡಿದರು. ಮನುಷ್ಯರು ಬಂದಮೇಲೆ ಭಯ ಭಕ್ತಿಗೆ ಅವರ ದೇವರನ್ನೂ ತಂದರು. ಯುದ್ಧ ಆಯಿತು. ಅದೆಷ್ಟೋ ಯುದ್ಧಗಳು ಅಂತಿನಿ. ರಕ್ತವೂ ಹರಿದಾಡಿತ್ತು. ಮತ್ತೊಬ್ಬ ರಾಜ ಬಂದು ಇದು ನಂದು ಅಂದ. ಮತ್ತೆ ಇನ್ನೊಂದು ಕೋಟೆ, ಇನ್ನೊಂದು ದೇವರ ಸ್ಥಾಪನೆ. ಒಬ್ಬರ ದೇವರು ಇನ್ನಬ್ಬರಿಗೆ ದೆವ್ವಗಳು ಅಂತೆ. ಏನೇನೊ ಅಂತಾರೆ. ನಂಗೆ ಹೆಸರು ಬೇರೆ ಇಟ್ಟಿದ್ದಾರೆ. ಮಧುಗಿರಿ ಬೆಟ್ಟ ಅಂತ. ನನಗ್ಯಾತ್ತಕ್ಕೆ ಈ ಹೆಸರು? ಅದು ಅವರ ಅನುಕೂಲಕ್ಕೆ. ನನಗೆ ನಾನು ಅನಾಮಧೇಯ. 
ಈಗ ಮಳೆಗಾಲ. ಅದೆನೊ ಈಗ ಮಳೆಯ ಪ್ರಮಾಣವು ಕಡಿಮೆಯಾಗಿದೆ ಅಂತ್ತಿದ್ರು.  ಮೋಡಗಳು ನನ್ನ ಚುಂಬಿಸಿ ಉದುರುವ ತುಂತುರು ಹನಿಗಳು ನನ್ನ ಮೈನೆಲ್ಲಾ ತೋಯಿಸಿ ಮಡಿ ಮಾಡುತ್ತಿದ್ದವು. ಬಿಸಿಲಿಗೆ ಬೆಂದಿದ್ದ ದೇಹವು ಫುಲ್ ಫ್ರೆಶ್ ಆಗ್ತಿತ್ತು. ನನ್ನ ಮೈಯೆಲ್ಲಾ ಹರಡಿರುವ ಈ ಗಿಡ ಮರಗಳು ಮಳೆ ಬಂದರೆ ಸಾಕು ಹಚ್ಚ ಹಸಿರನ ಅಂಗಿ ತೊಟ್ಟು ನಿಲ್ತಿದ್ದ್ವು. ಈ ಸಮಯದಲ್ಲಿ ಕ್ರಿಮಿ ಕೀಟಗಳು ಫುಲ್ ಆಕ್ಟಿವ್. ಅವು ಒಂದನ್ನೊಂದು ತಿಂದು ಬದುಕ್ತಾವಂತೆ. ಒಂದರ ಉಳಿವಿಗೆ ಇನ್ನೊಂದರ ಅಳಿವು ಅನಿವಾರ್ಯವೆ ಬಿಡಿ.

ಮಳೆಗಾಲದ ಸಮಯಕ್ಕೆ ಈ ಚಾರಣದ ನೆಪ ಇಟ್ಟುಕೊಂಡು ಬರುವ ಹುಡುಗರು ಹೆಚ್ಚು. ಕೆಲವೊಮ್ಮೆ ವಿದೇಶಿಯರು ಬರುವರು. ನನಗಂತು ಈ ವರ್ಣ,ಜಾತಿ,ಧರ್ಮ,ಮತ, ಪಂಥಗಳ ಬೇದ ಭಾವ ಇಲ್ಲ.ಎಲ್ಲರೂ ಮನುಷ್ಯರೇ ಅಲ್ಲವೆ. ಬರುವವರು ನನ್ನ ಬುಡದಿಂದ ತಲೆಯವರಗೂ ಹತ್ತಿ ವಿಹಂಗಮ ನೋಟದ ಸವಿಯನ್ನು ಸವಿಯುವರು. ಕೆಲವರು ನನ್ನ ಮೈಮೇಲೆ ಪ್ರೇಮ ನಿವೇದನೆಯನ್ನೂ ಮಾಡುವರು. ಮೊನ್ನೆ ಒಬ್ಬ ಬಂದಿದ್ದ. ರಾಜಿ ಮಿಸ್ ಯು , ಲವ್ ಟಿಲ್ ಮೈ ಡೆತ್ ಅಂತಿದ್ದ. ಅಪ್ಪಾ ಐ ಲವ್ ಯು ಅಮ್ಮಾ ಯು ಆರ್ ಗ್ರೇಟ್ ಅಂತ ಯಾರೂ ಬರಲಿಲ್ಲ.

 ಮೊದಲು ಆಧುನಿಕತೆ ಕಡಿಮೆ ಇತ್ತು. ಅಲ್ಲೊಂದೊ ಇಲ್ಲೊಂದು ಮನೆಗಳು ಇರ್ತಿದ್ವು. ಈಗ ಈ ಎಲ್ಲ ಪ್ರಕೃತಿಗೆ ಮಾನವನೇ ಯಜಮಾನ ಅಲ್ಲವೆ. ಅವನಿಗಿಷ್ಟ ಬಂದಹಾಗೆ ಅದನ್ನು ಬಳಸುತ್ತಿದ್ದಾನೆ. ಒಡೆಯ ಅಂದಮೇಲೆ ಅವನದ್ದೆ ಅಧಿಕಾರ. 
ಆದರು ಅನಿಸುತ್ತೆ ಈ ಮಾನವ ಜೀವಿ ಇಲ್ಲದಿದ್ದರೆ ನಾನು ಇನ್ನೂ ಚೆನ್ನಾಗಿ ಕಾಣುತ್ತಿದ್ದೆ ಏನೊ?. ವೈಭವವು ಇರ್ತಿತ್ತು ವೈಶಿಷ್ಟ್ಯವು ಇರ್ತಿತ್ತು. ನಾನಷ್ಟೆ ಅಲ್ಲಿ ಇಡೀ ಪ್ರಪಂಚವೇ ಸುಂದರವಾಗಿ ಶಾಂತಿಯಿಂದ ಇರ್ತಿತ್ತು. 

Theater Alive !!

ಸುಮಾರು ಎರಡು ಗಂಟೆಗಳ ಒಂದು ನಾಟಕವಿರುತ್ತೆ. ಕಾಮೆಡಿ ಇರುತ್ತೆ, ಸೆಂಟಿಮೆಂಟ್ ಇರುತ್ತೆ, ಪೌರಾಣಿಕತೆ ಇರುತ್ತೆ, ಆಧುನಿಕತೆ ಇರುತ್ತೆ, “ಮನಮುಟ್ಟುವ” ಸಂಗೀತವಿರುತ್ತೆ. ಪಾಲಿಟಿಕ್ಸ ಇರುತ್ತೆ, ಸಮಾಜದ ನೈಜ ಸನ್ನಿವೇಶಗಳೂ ಇರುತ್ತೆ. ಕೆಲವೊಮ್ಮೆ ಆಧ್ಯಾತ್ಮವೂ ಸಿಗುತ್ತೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತಿ ನಾಟಕದಲ್ಲೂ ಕಲಿಯಲೇ ಬೇಕಾದ ಸಂದೇಶವಿರುತ್ತೆ. ತಿಳಿಯಲೇ ಬೇಕಾದ ಜ್ಞಾನವಿರುತ್ತೆ. ಇಲ್ಲದೇ ಇರುವುದೆಂದರೆ ಗಾಡಿಗಳು ಹಾರಾಡುವುದು, ಕಲ್ಪನೆಗೂ ನಿಲುಕದ ಸಾಹಸ ದೃಶ್ಯಗಳು. ನಾನು ನೋಡಿದ ಎಲ್ಲ ನಾಟಕದಲ್ಲಿ ಪ್ರತಿ ನಟ, ನಟಿಯರ ನಟನೆಯಲ್ಲಿ ಪಕ್ವತೆ ಕಂಡಿದ್ದೆನೆ. ಇರಲೇಬೇಕು, ಹತ್ತಾರು ಟೇಕ್ ತೆಗೆದುಕೊಳ್ಳಲು ಇಲ್ಲಿ ಸಮಯವಿರುತ್ತೆ??
ಅಬ್ಬಾ! ನಿನ್ನೆ ನೋಡಿದ ಸುಯೋಧನ ನಾಟಕವಂತು ಅದೆಷ್ಟು ಚೆನ್ನಾಗಿತ್ತು. ದುರ್ಯೋಧನನ ಪಾತ್ರಧಾರಿಯ ನಟನೆ ಮತ್ತು ಸಂಭಾಷಣೆಯನ್ನು ಎಷ್ಟು ಹೊಗಳಿದರೂ ಕಡಿಮೆನೆ. ಆದರೂ ಅರ್ಧದಷ್ಟು ಸೀಟುಗಳು ಖಾಲಿನೆ ಇದ್ವು. ನೀವು ಸೇತುರಾಮರ ಗತಿ ಮತ್ತು ಅತೀತ ನೋಡಬೇಕು. ಅವರ ಸಂಭಾಷಣೆಗೆ ನೀವು ಅಭಿಮಾನಿಗಳಾಗಳೇಬೇಕು. ಕಂಚುಕಿ ನಾಟಕ ನೋಡಿದ್ದೆ. ನಮ್ಮ (ನಮ್ಮೂರಿನವರು) ಕಂಬಾರರು ಬರೆದ ಸಿಂಗಾರವ್ವ ಆಧಾರಿತವಾದದ್ದು. ನಮ್ಮಜ್ಜ ಹೇಳ್ತಿದ್ದ ಬಯಲಾಟದ ಬಗ್ಗೆ ಅಲ್ಲಿ ಕೇಳಿದಾಗ ಅದೆಷ್ಟು ಖುಷಿಯಾಗಿತ್ತು. ಮಂದ್ರ ,ಅನಾವರಣ, ಟೆಂಪೆಸ್ಟ, ಈಗಷ್ಟೇ ನೋಡಿ ಬಂದ ಸಾಹೇಬರು ಬರುತ್ತಾರೆ ಎಲ್ಲ ನಾಟಕವೂ ಚೆನ್ನಾಗಿತ್ತು. ನಾಟಕದ ಕೊನೆಗೆ ನಾವು ತಟ್ಟುವ ಚಪ್ಪಾಳೆ ಯಾವ ಪ್ರಶಸ್ತಿಗೂ ಕಡಿಮೆ ಅಲ್ಲ ಎಂಬುದು ನಟರ ಮುಖದಲ್ಲಿ ಮೂಡುವ ಭಾವವೆ ಹೇಳುತ್ತೆ. ಪ್ರಶಸ್ತಿಗಿಂತ ಪ್ರೊತ್ಸಾಹ ದೊಡ್ಡದಲ್ಲವೆ.

ನಿಮ್ಮಲ್ಲಿ ನನ್ನದೊಂದು ಮನವಿ ಒಂದು ಸಲ ನೀವು ರಂಗಶಂಕರದ ಕಡೆಗೊ ,ರವೀಂದ್ರ ಕಲಾಕ್ಷೇತ್ರದ ಕಡೆಗೊ, ಕಲಾಗ್ರಾಮದ ಕಡೆಗೊ ಹೋಗಿ ಒಂದು ನಾಟಕ ನೋಡಿ ಬನ್ನಿ ಇಷ್ಟವಾದರೆ ನೀವೆ ಮುಂದುವರಿಸುತ್ತಿರಿ.
೧೦೦ ಕೋಟಿ ಗಳಿಸುವ ಯಾವುದೆ ಚಲನಚಿತ್ರವನ್ನು ಎರಡು ಮೂರು ಭಾರಿ ನೋಡುವುದಕ್ಕಿಂತ ಒಮ್ಮೆ ಈ ನಾಟಕದ ಸವಿಯನ್ನು ಸವಿದು ನೋಡಿ. ನೀವು ಖಂಡಿತ ನಿರಾಶರಾಗುವುದಿಲ್ಲ ಎಂಬ ನಂಬಿಕೆ ಇದೆ. ಆಮೇಲೆ ಟಿಕೆಟ್ ದರ ನೂರೊ, ನೂರೈವತ್ತೊ ಇರುತ್ತೆ ಅಷ್ಟೇ.

ನನಗನಿಸಿದನ್ನು ನಾನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೆನೆ. ಇದರಲ್ಲಿ ಉದ್ಧಟತನ ಅನಿಸಿದ್ದಲ್ಲಿ ಕ್ಷಮೆ ಇರಲಿ.

ಅಣ್ಣಾ..

ಒಡುದ್ರು, ಒಂದಲ್ಲ ಎರಡು ಕಾಯಿ ಒಡುದ್ರು. ಸೇವಂತಿದು ಮಾಲೆ ಹಾಕಿದ್ರು. ಬೆಳಿಗ್ಗೆನೆ ಬೇಗ ಹೋಗಿ ಮಾರ್ಕೆಟ್ ಯಿಂದ ತಂದ್ದಿದನಂತೆ ೫೦ ರೂಪಾಯಿ ಕೊಟ್ಟು. ಕುಂಕುಮ ವಿಭೂತಿ ಎಲ್ಲಾ ಹಚ್ಚಿದ್ರು. ಹೊಸ ಗಾಡಿ ಜುಮ್ ಅಂತಿತ್ತು. ಎವೆಂಜರ್ ಅಂತೆ ೨೦೦ ಸಿಸಿದು. ಮಾಲೀಕನ ಮುಖದಲ್ಲಿ ಅದೇನೊ ಖುಷಿ. ಅರ್ಥವಾಗದ ಮಂತ್ರ ಹೇಳಿದ ಪೂಜಾರಿಗೆ ೧೦೧ ಕಾಣಿಕೆ ಇಟ್ಟ. ಎರಡು ನಿಂಬೆ ಹಣ್ಣು ಇಟ್ಟಿದ್ದ. ಮುಂದೆ ಒಂದು ಹಿಂದೆ ಒಂದು. ಪೂಜಾರಿ ಹೇಳಿದ್ರು ಗಾಡಿ ಸ್ಟಾರ್ಟ ಮಾಡು ಅಂತ. ಗಾಲಿಗಳು ಉರುಳಿದವು, ನಿಂಬೆ ಹಣ್ಣು ನಲುಗಿದವು. ಅಲ್ಲೆ ಕೂತಿದ್ದ ಮುದುಕ.ಕಾಲಿರಲಿಲ್ಲ. ಶಕ್ತಿನೂ ಇರಲಿಲ್ಲ. ಮಾಲೀಕನಿಗೆ ಅಣ್ಣಾ ಅಂತ ಕೈ ಮುಂದೆ ಚಾಚಿದ. ಅವನು ತಲೆ ಅಲ್ಲಾಡಿಸಿದ, ಬಾಯಿಯಿಂದ ಇಲ್ಲ ಅನ್ನಲಿಲ್ಲ. ಏನೊ ಕೊಡಬಹುದು ಅಂತ ಮತ್ತೆ ಅಂದ “ಅಣ್ಣಾ… ” ಅಂತ. (ವಿಪರ್ಯಾಸ ನೋಡಿ ಮೊಮ್ಮಗನ ವಯಸ್ಸಿನವನಿಗೆ ಮುದುಕ ಅಣ್ಣಾ ಅಂತಿದ್ದಾನೆ). ಈ ಸಾರಿ ಮಾಲೀಕ ಮಹಾಶಯ ಸಿಟ್ಟಿನಿಂದ ನೋಡಿದ. ಮುದುಕ ಬಿಡಲಿಲ್ಲ. ಮನಸ್ಸು ಕೇಳದಿದ್ದರೂ ಹಸಿವು ಕೇಳಬೇಕಲ್ಲ. ಮತ್ತೆ ಅಂದ “ಅಣ್ಣಾ… “. ಈ ಸಾರಿ ಮಾಲೀಕ ಬೈದ ” ಇಲ್ಲ ಅಂದ್ರೆ ಗೊತ್ತಾಗಲ್ವ, ನಿಮ್ಮಿಂದಾನೆ ನಮ್ಮ ದೇಶ ಹಿಂಗಾಗಿದೆ “. ಮುದುಕ ನಗತ್ತಾ ಮನಸ್ಸಲ್ಲೆ ಏನೊ ಗೊಣಗಿದ. ಹಸಿವು ಇನ್ನೂ ಇತ್ತು. ಮುದುಕ ತೆವಳುತ್ತಾ ಮುಂದೆ ಹೋದರೆ ಅಲ್ಲೊಂದು ಹೊಸ ಕಾರು ಪೂಜೆಗೆ ನಿಂತಿತ್ತು. ಮುದುಕ ಮತ್ತೆ ಕೈ ಮುಂದೆ ಚಾಚಿ ಅಂದ ” ಅಣ್ಣಾ…”

ಮಾನವೀಯತೆ

ತೇಲಿ ಬತ್ತೊಂದು ಪುಟ್ಟ ದೇಹ,
ಮಹಾಸಾಗರದ ಅಂಚಿಗೆ…
ನರಕ ಸದೃಶ ತನ್ನ ದೇಶದ,
ಎಲ್ಲೆ ಮೀರಿದ ತಪ್ಪಿಗೆ…
ಬಿಳಿಯದ್ದೊ, ಕಪ್ಪದ್ದೊ,
ಬಾವುಟ ಹಾರಿಸುವ ಯುದ್ಧಕ್ಕೆ…
ನನ್ನ ದೇವರೋ, ನಿನ್ನ ದೇವರೋ,
ಎಂಬ ಹುಚ್ಚಾಟದ ಕೂಗಿಗೆ…Part-PAR-Par8261894-1-1-0

ಕಣ್ಮುಚ್ಚಿದವು ಜೋಡಿ ಕಣ್ಣುಗಳು,
ಕನಸು ಚಿಗರುವ ಮುನ್ನ…
ಮುಚ್ಚಿತ್ತು ಬಾಯಿ ಶಾಶ್ವತವಾಗಿ,
ತೊದಲು ನುಡಿಯಾಡಿ ನಲಿಯುವ ಮುನ್ನ…
ಸೋತಿದ್ದವು ಕಾಲುಗಳು
ಆಡಿ ಓಡಿ ಜಿಗಿದು ಕುಪ್ಪಳಿಸುವ ಮುನ್ನ..‌.
ದೇಹ ಕಡಲು ಪಾಲಾಯಿತು,
ಪ್ರೀತಿಯ ದಡ ಸೇರುವ ಮುನ್ನ…

ಮಾನವೀಯತೆಯೇ? ದಹಿಸಿತ್ತದು,
ಸಿಡಿಮದ್ದಿನ ಜ್ವಾಲೆಗೆ..
ಬಳಲಿತ್ತು, ಧೂಳು ಹಿಡಿದಿತ್ತು,
ಮಾಯವಾಗಿತ್ತು, ಮರತೇ ಹೋಗಿತ್ತು,
ಜಾತಿ ಮತವೆಂಬ ಅಂಧಕಾರದ ಭ್ರಾಂತಿಗೆ…
ನಲುಗಿತ್ತು, ಕೊನೆಗೆ ಮಣ್ಣಾಗಿತ್ತು,
ಉದ್ದನೆಯ ಬಂದೂಕಿನ ಗುಂಡಿಗೆ…

ಏಕತೆಯ ಅನೇಕತೆ..

ಹಣೆಯಮೇಲೆ ವಿಭೂತಿ ಪಟ್ಟಿ..                  
ತಲೆಮೇಲೊಂದು ಬಿಳಿಯ ಟೊಪಿ…                  
ಕೊರಳಲಿ ಜೋತು ಬಿದ್ದಿತ್ತೊಂದು ಚಿನ್ಹೆ…                
ಏಕ ಮುಖದಲ್ಲೇಕೆ ಅನೇಕತೆಯ ಕುರುಹು….

ಸೂರ್ಯ ನಮಸ್ಕಾರವು ನಮ್ಮದಾಗಿರಲು,  
ಮಸೀದಿಯ ನಮಾಜ ಅವರಿಗೆ..                              
ಮತ್ತೆ ಏಸುವಿನ ಪ್ರಾರ್ಥನೆಯು ಇವರಿಗೆ..                  
ಏಕ ಮನಸ್ಸಿಗೇಕೆ ಅನೇಕತೆಯ ಪದ್ದತಿ…

ರಾಮನೊಬ್ಬ ಕೇಸರಿ ನನ್ನದೆಂದು..              
ಮೊಹಮ್ಮದನು ಹಸಿರಾಗಿರಲು…                      
ಪಾದ್ರಿಯು ಬಿಳಿಯಾಗಿ ನಿಂತನು…                            
ಏಕ ದೇಹದಲ್ಲೇಕೆ ಅನೇಕತೆಯ ಬಣ್ಣ

ಮೇಲ್ನೋಡುವರು ಎಲ್ಲರು.,                                    
ಯಾ ಅಲ್ಲಾ, ಹೇ ಜಿಸಸ್ , ಓ ದೇವರೆಂದು…
ಮೇಲಿರುವನೇ ದೇವರು??
ದಿಗಂದಾಚೆಗೊ? ಬೃಹ್ಮಾಂಡದಾಚೆಗೊ?

ತಿರುಪತಿಯು ಅವನೂರೇ? ಕಾಶಿಯೇ? ರಾಮೇಶ್ವರವೇ?
ಮೆಕ್ಕ ಮದೀನವೇ?? ಗುಮ್ಮಟದ ಮಸೀದಗಳೇ?
ಫಾದರ್ ಇರುವ ಚರ್ಚ್ ನ ಗೋಡೆಗಳೆ??  
ಸ್ವಚ್ಛ ಮನಸ್ಸಿನ ದೇಹವಲ್ಲವೆ ದೆಗುಲ..

ಸ್ನೇಹಕ್ಕುಂಟೆ ಜಾತಿ ಮತ ಧರ್ಮ…                  
ಎಲ್ಲವನ್ನೂ ಮೀರಿದ್ದು ಪ್ರೀತಿಯಲ್ಲವೆ….              
ಯಾರಿಲ್ಲಿ ಮೇಲು? ಯಾವುದಿಲ್ಲಿ ಕೀಳು?        
ನಾವೆಲ್ಲರೂ ಅವನೊಬ್ಬನ ಮಕ್ಕಳಲ್ಲವೆ..

​ನಮ್ಮೆಲ್ಲರ ಕಥೆ…

ಮಗನನ್ನು  ಬೆಂಗಳೂರಿನ ಬಸ್ಸು ಹತ್ತಿಸಿ ಬಂದ ಮೇಲೆ ತಂದೆಯ ಕಣ್ಣು ಮಂಜಾಗಿತ್ತು. ಕಣ್ಣೀರ ಹನಿಗಳು ಜಾರಿ ಜಾರಿ ಕೆನ್ನೆಯನ್ನೆಲ್ಲಾ ಒದ್ದೆ ಮಾಡಿದ್ದವು. ತಾಯಿಯು ಅಷ್ಟೇ ಮಂಕಾಗಿ ನಿಂತಿದ್ದಳು. ಇಬ್ಬರೂ ಕಣ್ಣುಗಳಲ್ಲಿಯೇ ಏನೋ ಮಾತಾಡಿಕೊಂಡರು. ಎರಡು ವರ್ಷಗಳ ಹಿಂದೆಯಷ್ಟೆ ಕಟ್ಟಿದ್ದ ಮನೆ. ಬಣ್ಣ ಬಣ್ಣದ ಮನೆ. ಈಗ ಆ ವಿಶಾಲವಾದ ಮನೆಯಲ್ಲಿ ಇರುವದು ಆ ಎರಡು ಜೀವಗಳು ಮಾತ್ರ. ಹಳೆಯ ಬಾಡಿಗೆ ಮನೆ ನೆನಪಾಯಿತು. ಕರೆಂಟ್ ಇಲ್ಲದ ಮನೆಯಾಗಿದ್ದರೂ ಬೆಳದಿಂಗಳ ಜೊತೆಗೆ ಖುಷಿಯು ತುಂಬಿರುತ್ತಿತ್ತು. ಮನೆಯ ತುಂಬಾ ತುಂಬಿದ್ದ ಮೌನದ ಮಧ್ಯ ರಿಪೇರಿ ಆಗದ ಬರೀ ಫ್ಯಾನಿನ ಶಬ್ದವೆ ಕಿವಿಯ ತುಂಬಿತ್ತು. ಮಗನಿಗಾಗಿ ಮಾಡಿಟ್ಟಿದ್ದ ಹಬ್ಬದೂಟ ಈಗ ಇಬ್ಬರೂ ಮುಟ್ಟಲ್ಲೊಲ್ಲರು. ಮನದ ಮೌನ ಇಬ್ಬರ ಹಸಿವನ್ನು ಮರೆಮಾಚಿತ್ತು. ಇಳಿ ವಯಸ್ಸಿನ ದಂಪತಿಗಳಲ್ಲಿ ಮಕ್ಕಳಿಬ್ಬರು ವಿದೇಶಕ್ಕೆ ತೆರಳಿದರು ಎಂಬ ಖುಷಿಗಿಂತಲೂ ಅವರು ನಾವು ಬಯಸಿದಾಗ ಕಾಣದ ಮುಖಗಳಾದರು ಎಂಬ ದುಖವೇ ಹೆಚ್ಚಾಗಿತ್ತು. 

ದುಡ್ಡೊ? ಸಾಧನೆಯೊ? ಮತ್ತೊಂದೊ? ಮಕ್ಕಳು ತಮ್ಮ ತಮ್ಮ ದಾರಿ ಹಿಡಿದಿದ್ದರು. ಮಕ್ಕಳಿಗಾದರೂ ಅಷ್ಟೇ ಒಂದು ಮನೆ,ಕಾರು, ಮಡದಿ, ಮಕ್ಕಳು ಎಂಬ ಸಾಮಾನ್ಯ ಜೀವನದ ದಾರಿ ಬಿಟ್ಟು ಸಾಧನೆ ಹಾದಿ ತುಳಿಯುವುದೇ ಸರಿ ಅನ್ನಿಸಿತ್ತು.  ಕಷ್ಟಪಟ್ಟು ನಾನಾ ಬಗೆಯ ಕೆಲಸ ಮಾಡಿ , ಊಟಕ್ಕೂ ಗತಿವಿರದಿದ್ದರೂ ಅವರನ್ನು ಒದಿಸಿ ಇಂಜಿನಿಯರ್ ಮಾಡೋ ಕನಸ್ಸು ದೇವರ ದಯೆಯಿಂದ ನನಸ್ಸಾಯಿತು. ಓದಿದ ಮೇಲೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಬ್ಬರಿಗೂ ಕೈತುಂಬ ಸಂಬಳವಿರುವ ಕೆಲಸ. ನನ್ನ ಮಕ್ಕಳು ಎಸಿ ಆಫಿಸಲ್ಲಿ ಕೆಲಸ ಮಾಡ್ತಾರೆ ಅಂತ ಗೆಳೆಯ ರಾಮರಾಯರ ಹತ್ರ  ಅಂದು ಎಷ್ಟೊಂದು ಗರ್ವದಿಂದ ಹೇಳಿ ಕೊಂಡಿದ್ದೆ. ಇನ್ನೇನು ದುಡ್ಡಿಗೆ ಅಂಟಿಕೊಂಡಿದ್ದ ಕಷ್ಟಗಳು ದೂರಾದ ಮೇಲೆ ಮನಸ್ಸು ಹಗುರಾಯಿತು. ತಮ್ಮ ಕಾಲ ಮೇಲೆ ತಾವು ನಿಂತರು ಅನ್ನೊ ನಿಟ್ಟುಸಿರು ಸಾಕಾಗಿತ್ತು. ಮೂರು ತಿಂಗಳಿಗೊಮ್ಮೆನೊ, ನಾಲ್ಕು ತಿಂಗಳಿಗೊಮ್ಮೆನೊ ಅಥವಾ ಯಾವುದೊ ಹಬ್ಬ ಹರಿದಿನಗಳಲ್ಲಿ ಮನೆಗೆ ಬರುತ್ತಿದ್ದರು‌. ಒಮ್ಮೊಮ್ಮೆ ಕೆಲಸದ ನಿಮಿತ್ತ ಹೇಳಿ ಬರಲೊಲ್ಲರು. ಬಾಡಿಗೆ ಮನೆಯಾದರೂ ಪ್ರತಿದಿನ ಎಲ್ಲರೂ ಕೂತು ಮಾತನಾಡುತ್ತಾ ಊಟ ಮಾಡುತ್ತಿದ್ದ ಕಾಲ ಈಗ ಬದಲಾಗಿ ಹೋಗಿತ್ತು. ಹಬ್ಬದ ದಿನಗಳಲ್ಲಿ ಸಾಲ ಮಾಡಿಯಾದರೂ ಎಲ್ಲರೂ ಹೊಸ ಬಟ್ಟೆ ಹಾಕಿ ಆಚರಿಸುತ್ತಿದ್ದ ದಿನಗಳು ಅವು. ಈಗ ಬಗೆ ಬಗೆಯ ಬಟ್ಟೆಗಳನ್ನು ಕೊಳ್ಳುವ ಶಕ್ತಿಯಿದ್ದರೂ ಹಾಕುವ ದೇಹಗಳು ಮಾತ್ರ ದೂರದೂರಿನಲ್ಲಿವೆ. ಗಣೇಶನ ಹಬ್ಬಕ್ಕೆ ಮಕ್ಕಳಿಬ್ಬರು ಮನೆಯ ಸಿಂಗರಿಸಿ, ಮಡದಿ ಬಗೆ ಬಗೆಯ ನೈವೇದ್ಯ ಮಾಡಿ, ನಾಲ್ಕಾರು ಹುಡುಗರನ್ನು ಕೂಡಿಸಿ ಗಣೇಶನ ಪ್ರತಿಷ್ಟಾಪನೆ ಮಾಡುತ್ತಿದ್ದ ನೆನಪುಗಳು.   ಈ ಸರಿ ಇಬ್ಬರೂ ಬರಲಾಗದು ಎಂದಾಗ ಒಬ್ಬನೇ ಆಟೊ ರಿಕ್ಷಾದಲ್ಲಿ ಗಣೇಶನನ್ನು ತಂದು ಪ್ರತಿಷ್ಟಾಪನೆ ಮಾಡಿದೆ. ಪಟಾಕಿ  ಸದ್ದೂ ಇರಲಿಲ್ಲ , ಘೋಷಣೆಗಳು ಇರಲಿಲ್ಲ. ಅಪ್ಪ ಪ್ರವಾಸಕ್ಕೆ ಹೋಗಬೇಕು ದುಡ್ಡು ಕೊಡಿ ಅಂತಿದ್ದ ಪುಟಾಣಿಗಳ ಮುಖ ಈಗಲೂ ಕಣ್ಮುಂದೆ ಬಂದು ನೀರು ತರಿಸುತ್ತೆ. ಈಗ ಅದೇ ರಾಮರಾಯರು ಸಮಾಧಾನ ಪಡಿಸುತ್ತಾರೆ.
ದೊಡ್ಡವನು ಅಮೇರಿಕಾಕ್ಕೆ ಹೋಗಿ ಆಗಲೇ ಎರಡು ವರ್ಷಗಳಾಗಿತ್ತು ಈಗ ಸಣ್ಣವನು ಜರ್ಮನಿಗೆ‌ ಹೋಗ್ತಿನಿ ಅಂದಾಗ ಬೇಡ ಅನ್ನೊದಾದರೂ ಹೇಗೆ?? ಅವರವರ ಜೀವನದ ಹಾದಿ ಅವರೆ ನಿರ್ಧರಿಸಬೇಕು. ನಮ್ಮ ಮಾರ್ಗದರ್ಶನದ ಅಗತ್ಯ ಈಗ ಅವರಿಗಿಲ್ಲ ಅನಿಸಿತು. ನನಗೆ ನೀನು ನಿನಗೆ ನಾನು ಅಂದುಕೊಳ್ಳುತ್ತಾ ಅವಳ ಮುಖವನ್ನು ನೋಡಿ ನಗೆಹಾಯಿತು. 

​ಕಣ್ಮರೆಯಾಗುತಿರುವ ರೆಕ್ಕೆ ಪುಕ್ಕಗಳು..

ಅಮ್ಮ ರೆಕ್ಕೆ ಬಂತು ಪುಕ್ಕ ಬಂತು ಹಾರಿ ಹೋಗಲೆ ನಾನು….
ಎಷ್ಟು ಕಾಲ ಗರಿಮುದುರಿ ಕೂರಲಿ ನೋಡುತ ನೀಲಿ ಬಾನು….
ನೀ ಹೇಳಿದ ಕೆರೆಯನ್ನೊಮ್ಮೆ ಸುತ್ತಿ,‌ ಗಿಡಮರವ ಹತ್ತಿ…
ಬದುಕ ಕಟ್ಟುವೆ  ನಾ ಪ್ರಾಣಿ ಸಂಕುಲದಲ್ಲಿ ಲೀನವಾಗಿ…

ಹಸಿರಿಲ್ಲ ಅಲ್ಲಿ ಉಸಿರಿಲ್ಲ ಇಲ್ಲಿ ಮಗು ಎಲ್ಲಿ ಹೋಗುವೆ ನೀನು…
ಕಷ್ಟಪಟ್ಟು ಗಿಡವ ಹುಡುಕಿ ಗೂಡು ಕಟ್ಟಿರುವೆ ನಾನು…
ಮಗು ಆಗ ಕಾಡೊಂದಿತ್ತು ಈಗ ಊರಾಗಿ ಹರಡಿದೆ..
ಹಸಿರು ಭೂಮಿಯನ್ನು ಬಣ್ಣದ ಕಟ್ಟಡಗಳು ನುಂಗಿ ನಿಂತಿವೆ….

ದಿಗಂತದಾಚೆಯೂ ಕಾಣುವುದಲ್ಲಿ ಕಪ್ಪು ಹೊಗೆ…. 
ನಿಂತರೆ ಸಾಕು ನೆತ್ತಿಯ ಸುಡುವ  ಬಿಸಿಲ ಬೆಗೆ..
ಹಕ್ಕಿಗಳ ಕೂಗಿಲ್ಲ ಅಲ್ಲಿ ಬರೀ ವಾಹನಗಳದ್ದೇ ಸದ್ದು..
ಮನುಷ್ಯ ಪ್ರಾಣಿಯೇ ಬದುಕುತಿಹನು ಎದ್ದು ಬಿದ್ದು… 

ಮಳೆಯು ಕಾಣದೆ ಆಗುತ್ತಿದೆ ಎಲ್ಲೆಡೆ ಬರದ ಆಗಮನ..
ಬೆಳವಣಿಗೆ ಹೆಸರಲ್ಲಿ ನಡೆದಿದೆ ನಿತ್ಯ ಮಾಲಿನ್ಯದ ನರ್ತನ…
ಕಾಡು ಕಡಿದು ಊರು ಬೆಳೆಸಿ…
ಮೆರೆಯುತಿಹನು ಮಾನವ ವನ್ಯಜೀವಿಗಳ ಮನೆಯ ಆವರಿಸಿ…