ಅಣ್ಣಾ..

ಒಡುದ್ರು, ಒಂದಲ್ಲ ಎರಡು ಕಾಯಿ ಒಡುದ್ರು. ಸೇವಂತಿದು ಮಾಲೆ ಹಾಕಿದ್ರು. ಬೆಳಿಗ್ಗೆನೆ ಬೇಗ ಹೋಗಿ ಮಾರ್ಕೆಟ್ ಯಿಂದ ತಂದ್ದಿದನಂತೆ ೫೦ ರೂಪಾಯಿ ಕೊಟ್ಟು. ಕುಂಕುಮ ವಿಭೂತಿ ಎಲ್ಲಾ ಹಚ್ಚಿದ್ರು. ಹೊಸ ಗಾಡಿ ಜುಮ್ ಅಂತಿತ್ತು. ಎವೆಂಜರ್ ಅಂತೆ ೨೦೦ ಸಿಸಿದು. ಮಾಲೀಕನ ಮುಖದಲ್ಲಿ ಅದೇನೊ ಖುಷಿ. ಅರ್ಥವಾಗದ ಮಂತ್ರ ಹೇಳಿದ ಪೂಜಾರಿಗೆ ೧೦೧ ಕಾಣಿಕೆ ಇಟ್ಟ. ಎರಡು ನಿಂಬೆ ಹಣ್ಣು ಇಟ್ಟಿದ್ದ. ಮುಂದೆ ಒಂದು ಹಿಂದೆ ಒಂದು. ಪೂಜಾರಿ ಹೇಳಿದ್ರು ಗಾಡಿ ಸ್ಟಾರ್ಟ ಮಾಡು ಅಂತ. ಗಾಲಿಗಳು ಉರುಳಿದವು, ನಿಂಬೆ ಹಣ್ಣು ನಲುಗಿದವು. ಅಲ್ಲೆ ಕೂತಿದ್ದ ಮುದುಕ.ಕಾಲಿರಲಿಲ್ಲ. ಶಕ್ತಿನೂ ಇರಲಿಲ್ಲ. ಮಾಲೀಕನಿಗೆ ಅಣ್ಣಾ ಅಂತ ಕೈ ಮುಂದೆ ಚಾಚಿದ. ಅವನು ತಲೆ ಅಲ್ಲಾಡಿಸಿದ, ಬಾಯಿಯಿಂದ ಇಲ್ಲ ಅನ್ನಲಿಲ್ಲ. ಏನೊ ಕೊಡಬಹುದು ಅಂತ ಮತ್ತೆ ಅಂದ “ಅಣ್ಣಾ… ” ಅಂತ. (ವಿಪರ್ಯಾಸ ನೋಡಿ ಮೊಮ್ಮಗನ ವಯಸ್ಸಿನವನಿಗೆ ಮುದುಕ ಅಣ್ಣಾ ಅಂತಿದ್ದಾನೆ). ಈ ಸಾರಿ ಮಾಲೀಕ ಮಹಾಶಯ ಸಿಟ್ಟಿನಿಂದ ನೋಡಿದ. ಮುದುಕ ಬಿಡಲಿಲ್ಲ. ಮನಸ್ಸು ಕೇಳದಿದ್ದರೂ ಹಸಿವು ಕೇಳಬೇಕಲ್ಲ. ಮತ್ತೆ ಅಂದ “ಅಣ್ಣಾ… “. ಈ ಸಾರಿ ಮಾಲೀಕ ಬೈದ ” ಇಲ್ಲ ಅಂದ್ರೆ ಗೊತ್ತಾಗಲ್ವ, ನಿಮ್ಮಿಂದಾನೆ ನಮ್ಮ ದೇಶ ಹಿಂಗಾಗಿದೆ “. ಮುದುಕ ನಗತ್ತಾ ಮನಸ್ಸಲ್ಲೆ ಏನೊ ಗೊಣಗಿದ. ಹಸಿವು ಇನ್ನೂ ಇತ್ತು. ಮುದುಕ ತೆವಳುತ್ತಾ ಮುಂದೆ ಹೋದರೆ ಅಲ್ಲೊಂದು ಹೊಸ ಕಾರು ಪೂಜೆಗೆ ನಿಂತಿತ್ತು. ಮುದುಕ ಮತ್ತೆ ಕೈ ಮುಂದೆ ಚಾಚಿ ಅಂದ ” ಅಣ್ಣಾ…”

Leave a comment

Search